ಮಂಗಳೂರಿನ ಕಾಟಿಪಳ್ಳದಲ್ಲಿ ಬರ್ಬರವಾಗಿ ಹತ್ಯೆಗೀಡಾದ ದೀಪಕ್ ರಾವ್ ನಿವಾಸಕ್ಕೆ ಇಂದು 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಜೇತ, 'ಒಳ್ಳೆ ಹುಡುಗ' ಪ್ರಥಮ್ ಭೇಟಿ ನೀಡಿದ್ದರು. ದೀಪಕ್ ರಾವ್ ಅವರ ಕುಟುಂಬದ ಸಂಕಷ್ಟಕ್ಕೆ ಪ್ರಥಮ್ ಸ್ಪಂದಿಸಿದ್ದು, ಐವತ್ತು ಸಾವಿರ ರೂಪಾಯಿಯನ್ನ ಪ್ರಥಮ್ ನೀಡಿದ್ದಾರೆ. ದೀಪಕ್ ರಾವ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿರುವ ಪ್ರಥಮ್, ''ಕುಟುಂಬದವರು ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಎಲ್ಲರೂ ಸಾಮರಸ್ಯದಿಂದ ಇರಬೇಕು. ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ'' ಎಂದಿದ್ದಾರೆ. ಸದ್ಯ 'ಎಂ.ಎಲ್.ಎ' ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರಥಮ್, ಡಬ್ಬಿಂಗ್ ಕೆಲಸದಲ್ಲಿ ಬಿಜಿಯಾಗಿದ್ದರು. ಡಬ್ಬಿಂಗ್ ಮುಗಿಯುತ್ತಿದ್ದಂತೆಯೇ, ನೇರವಾಗಿ ಮಂಗಳೂರಿಗೆ ತೆರಳಿದ ಪ್ರಥಮ್, ದೀಪಕ್ ರಾವ್ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದಾರೆ.
ಅಂದ್ಹಾಗೆ, ಜನವರಿ 3 ರಂದು ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ದೀಪಕ್ ರಾವ್ ಬಲಿಯಾಗಿದ್ದರು. ಈ ಹಿನ್ನಲೆಯಲ್ಲಿ ದೀಪಕ್ ರಾವ್ ಒಬ್ಬರೇ ಆಧಾರಸ್ತಂಭವಾಗಿದ್ದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಪರಿಣಾಮ, ದೀಪಕ್ ರಾವ್ ಕುಟುಂಬಕ್ಕೆ ಸಹಾಯಹಸ್ತ ಚಾಚಲು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ #SupportDeepakFamily ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭವಾಗಿತ್ತು.